'ಹೊಸ ವರ್ಷದ ಆರಂಭದಲ್ಲೇ ಹಾಸನ ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟೀನ್' ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 'ಇಂದಿರಾ ಕ್ಯಾಂಟೀನ್' ಆರಂಭಿಸಲು ಹಾಸನ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಹಾಸನ ನಗರದಲ್ಲಿ 2 ಹಾಗೂ ಜಿಲ್ಲೆಯ ಇತರ ಎಲ್ಲಾ ತಾಲ್ಲೂಕುಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುತ್ತಿದ್ದು, ಹೊಸ ವರ್ಷದ ಆರಂಭದಲ್ಲೇ ಈ ಎಲ್ಲಾ 9 ಕ್ಯಾಂಟೀನ್ ಗಳು ಕಾರ್ಯಾರಂಭ ಮಾಡಲಿವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.ಹೆಚ್ಚು ಜನರಿಗೆ ಈ ಕಾರ್ಯಕ್ರಮದ ಲಾಭ ದೊರೆಯಬೇಕು ಎನ್ನುವ ಉದ್ದೇಶದಿಂದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಈಗಾಗಲೇ ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದರು.ನಗರ ಸ್ಥಳೀಯ ಸಂಸ್ಥೆಗಳ ಜನಸಂಖ್ಯೆ ಆಧರಿಸಿ ಉಪಹಾರ ಮತ್ತು ಊಟವನ್ನು ಮಿತಿಗೊಳಿಸಲಾಗಿದೆ. ಅದರಂತೆ, ಹಾಸನ ನಗರದಲ್ಲಿ 1,000 ಅರಸೀಕರೆ ಮತ್ತು ಚನ್ನರಾಯಪಟ್ಟಣದಲ್ಲಿ ತಲಾ 500, ಹೊಳೆನರಸೀಪುರ, ಸಕಲೇಶಪುರ ಮತ್ತು ಬೇಲೂರಿನಲ್ಲಿ ತಲಾ 300 ಆಲೂರು ಮತ್ತು ಅರಕಲಗೂಡಿನಲ್ಲಿ ತಲಾ 200 ಜನಸಂಖ್ಯೆಗೆ ಉಪಾಹಾರ/ಊಟ ಒದಗಿಸಲಾಗುತ್ತಿದೆ.